ಕೊಲೆಸ್ಟಿರಾಲ್

ಬಹುಮಟ್ಟಿಗೆ ಎಲ್ಲ ಉಚ್ಚದರ್ಜೆಯ ಜೀವಿಗಳಲ್ಲೂ ಅಧಿಕ ಮೊತ್ತದಲ್ಲಿ ಇರುವ ಸ್ಟಿರಾಲ್ ಅಥವಾ ಸ್ಟಿರಾಯ್ಡ್ ಆಲ್ಕೊಹಾಲ್. ಇದರ ರಾಸಾಯನಿಕ ಸೂತ್ರ ಅ27ಊ45ಔಊ . ಇದು ಬಿಳುಪಾದ ಮೇಣದಂಥ ಆಲ್ಕೊಹಾಲಿನ ಘನವಸ್ತು. ಕೊಬ್ಬಿನೊಡನೆ ಸೇರಿರುತ್ತದೆ. ಆದರೆ ರಾಸಾಯನಿಕವಾಗಿ ಕೊಬ್ಬಿನಿಂದ ಭಿನ್ನವಾದದ್ದು. ರೋಗಕ್ಕೊಳಗಾದ ಪಿತ್ತಜನಕಾಂಗಗಳಲ್ಲಿ ದೊರೆಯುವ ಹರಳುಗಳಲ್ಲಿನ ಮುಖ್ಯ ಸಂಯುಕ್ತ ಕೊಲೆಸ್ಟಿರಾಲ್. ಈ ಸಂಯುಕ್ತದ ರಚನಾರಹಸ್ಯವನ್ನು ವಿಂಡಾಸ್ ಮತ್ತು ವೀಲೆಂಡರೂ ಜೈವಿಕಸಂಯೋಜನೆಯ ರಹಸ್ಯವನ್ನು ಬ್ಲಾಕ್, ಕಾರ್ನ್‍ಫೋರ್ತ್ ಮತ್ತು ಪೋಪ್ ಜಾಕ್‍ರೂ ಬಿಡಿಸಿರುತ್ತಾರೆ.

ವಿದ್ಯುತ್ ಘಾತಗಳ (ಎಲೆಕ್ಟ್ರಿಕ್ ಇಂಪಲ್ಸಸ್) ಮೂಲಕ ಸಂದೇಶಗಳನ್ನು ಸ್ವೀಕರಿಸುವ, ಸಾಗಿಸುವ ಮತ್ತು ನೀಡುವ ಮಿದುಳು, ಮಿದುಳುಬಳ್ಳಿ ಮತ್ತು ನರಮಂಡಲಗಳಲ್ಲಿ ಕೊಲೆಸ್ಟಿರಾಲ್ ಸಾಂದ್ರೀಕೃತವಾಗಿದ್ದು ಅವುಗಳಲ್ಲಿನ ವಿವಿಧ ವಿದ್ಯುದ್ವಾಹಕ, ಕೋಶಗಳ ನಡುವಣ ವಿದ್ಯುತ್ಪ್ರತಿಬಂಧಕವಾಗಿ ಇದು ಕೆಲಸ ಮಾಡುವುದೆಂದು ಭಾವಿಸಲಾಗಿದೆ. ದೇಹದಲ್ಲಿರುವ ಹಲವು ಹಾರ್ಮೋನುಗಳು ಮತ್ತು ಪಿತ್ತರಸದ ಆಮ್ಲಗಳಿಗೆ ಕೊಲೆಸ್ಟಿರಾಲ್ ಪೂರ್ವಗಾಮೀ (ಪ್ರೀಕರ್ಸರ್) ಆಗಿದೆ. ವಾಣಿಜ್ಯಗಾತ್ರದಲ್ಲಿ ಕೊಲೆಸ್ಟಿರಾಲ್‍ನ್ನು ಹಸು, ಎಮ್ಮೆಗಳ ಮಿದುಳು ಬಳ್ಳಿಗಳಿಂದ ಪಡೆಯಬಹುದು. ಈ ಸಂಯುಕ್ತವನ್ನು ಹಲವು ಔಷಧಗಳಲ್ಲೂ ಔಷಧೀಯ ಮಧ್ಯವರ್ತಿಯಾಗಿಯೂ ಹಲವು ಅಂಗರಾಗಗಳ ತಯಾರಿಕೆಯಲ್ಲಿಯೂ ಉಪಯೋಗಿಸಲಾಗುತ್ತಿದೆ.
ವಿತರಣೆ : ಕೊಲೆಸ್ಟಿರಾಲ್ ಶರೀರದ ಎಲ್ಲ ಅಂಗಾಂಶಗಳಲ್ಲಿಯೂ ದ್ರವವಸ್ತುಗಳಲ್ಲಿಯೂ ಇರುತ್ತದೆ. ಮಿದುಳಿನಲ್ಲಿ, ಮೂತ್ರಜನಕಾಂಗಗಳ ಮೇಲಿರುವ ಸುಪ್ರರೀನಲ್‍ಗಳೆಂಬ ನಿರ್ನಾಳಗ್ರಂಥಿಗಳಲ್ಲಿ ಮತ್ತು ಬೆನ್ನುಹುರಿಯಲ್ಲಿ ಇದರ ವಿತರಣೆ ಗರಿಷ್ಠ. 70 ಕೆಜಿ. ತೂಕದ ಮನುಷ್ಯನ ಅಂಗಾಂಗಗಳಲ್ಲಿ ಇರುವ ಒಟ್ಟು ಕೊಲೆಸ್ಟಿರಾಲ್ 100 ಗ್ರಾಂಗಳಿಗಿಂತ ಸ್ವಲ್ಪ ಹೆಚ್ಚು. ಇದರಲ್ಲಿ 30 ಗ್ರಾಂ ಮೇದಸ್ಸಿನಿಂದ ಕೂಡಿದ ಅಂಗಾಂಗಗಳಲ್ಲಿಯೂ 25 ಗ್ರಾಂ ಮಿದುಳಿನಲ್ಲಿಯೂ 20 ಗ್ರಾಂ ಮಾಂಸಖಂಡಗಳಲ್ಲಿಯೂ 5 ಗ್ರಾಂಗಿಂತಲೂ ಸ್ವಲ್ಪ ಹೆಚ್ಚು ರಕ್ತದಲ್ಲಿಯೂ 5 ಗ್ರಾಂ ಪಿತ್ತಜನಕಾಂಗದಲ್ಲಿಯೂ 0.5 ಗ್ರಾಂ ಸುಪ್ರರೀನಲ್ ನಿರ್ನಾಳಗ್ರಂಥಿಯಲ್ಲಿಯೂ ಇರುತ್ತದೆ. ಪಿತ್ತಜನಕಾಂಗ ಕೊಲೆಸ್ಟಿರಾಲನ್ನು ಬಿಡಿಯಾಗಿ ಸ್ರವಿಸುತ್ತದೆ. ಇಲ್ಲಿಂದ ಪಿತ್ತರಸದ ಸಂಗಡ ಮುಂಗರುಳನ್ನು ಸೇರುತ್ತದೆ. ದಿನ ಒಂದಕ್ಕೆ ಸುಮಾರು 1-2 ಗ್ರಾಂ ಕೊಲೆಸ್ಟಿರಾಲ್ ಪಿತ್ತರಸದ ಸಂಗಡ ಸ್ರವಿಸುತ್ತದೆ. ಇದು ಸಾಮಾನ್ಯವಾಗಿ ಊಟದಲ್ಲಿ ತೆಗೆದುಕೊಳ್ಳುವ ಅಂಶಕ್ಕಿಂತ ಹೆಚ್ಚು. ಕರುಳಿನ ಒಳಪೊರೆಯಿಂದಲೂ ಸ್ವಲ್ಪ ಕೊಲೆಸ್ಟಿರಾಲ್ ಕರುಳಿನಲ್ಲಿರುವ ಆಹಾರದ ಜೊತೆ ಸೇರುತ್ತದೆ. ಗಮನಾರ್ಹವಾದಷ್ಟು ಕೊಲೆಸ್ಟಿರಾಲ್ ಕರುಳಿನಿಂದ ಹಿಂದಕ್ಕೆ ಹೀರಿಕೊಳ್ಳಲ್ಪಡುತ್ತದೆ. ಕೊಲೆಸ್ಟಿರಾಲ್‍ನ ಸ್ವಲ್ಪ ಭಾಗ ಕರುಳಿನಲ್ಲಿರುವ ಕಿಣ್ವಕಾರಕ ಜೀವಾಣುಗಳಿಂದ ಸ್ಟಿರಾಲ್‍ಗಳಾಗಿ ಪರಿವರ್ತನೆ ಹೊಂದುತ್ತದೆ. ಮಲವಿಸರ್ಜನೆಯಲ್ಲಿ ದಿನವಹಿ 0.3-1 ಗ್ರಾಂ ವರೆಗೂ ಸ್ಟಿರಾಲ್‍ಗಳು, ಕೊಲೆಸ್ಟಿರಾಲ್ ಕೊಪ್ರೊಸ್ಟಿರಾಲ್ ಮತ್ತು ಕೊಲೆಸ್ಟಿರಾಲ್ ರೀತಿ ಹೊರಹಾಕಲ್ಪಡುತ್ತವೆ.

ಸಂಶ್ಲೇಷಣೆ : ಕೊಲೆಸ್ಟಿರಾಲಿನ ಇಂಗಾಲದ ಅಸ್ಥಿಪಂಜರ ಅಸಿಟೇಟಿನಿಂದ ಸಂಶ್ಲೇಷಿಸಲ್ಪಟ್ಟಿದೆ. ಪಿತ್ತಜನಕಾಂಗ ಬಹಳವಾಗಿ ಕೊಲೆಸ್ಟಿರಾಲನ್ನು ಸಂಯೋಜಿಸುತ್ತದೆ. ಪಿತ್ತಜನಕಾಂಗವನ್ನು ತೆಗೆದ ಸಂದರ್ಭದಲ್ಲಿ ಸಣ್ಣಕರುಳು, ಮೂತ್ರ ಜನಕಾಂಗಗಳು, ವೃಷಣಗಳು, ಮತ್ತು ಚರ್ಮ ಕೊಲೆಸ್ಟಿರಾಲನ್ನು ಸಂಯೋಜಿಸುತ್ತವೆ. ಅಡ್ರಿನಲ್ ಎಂಬ ನಿರ್ನಾಳಗ್ರಂಥಿಗಳಲ್ಲಿ ಕೊಲೆಸ್ಟಿರಾಲ್ ಹಾರ್ಮೋನುಗಳಾಗಿ ಪರಿವರ್ತನೆಯಾಗುತ್ತದೆ. ಕೊಲೆಸ್ಟಿರಾಲನ್ನು ಅಂಡಕೋಶಗಳೂ ಗರ್ಭವೇಷ್ಟನಗಳೂ ಹಾರ್ಮೋನುಗಳ ಉತ್ಪತ್ತಿಗೆ ಉಪಯೋಗಿಸುತ್ತವೆ. ಕೊಲೆಸ್ಟೇನ್ ಎಂಬ ಮೂಲ ರಾಸಾಯನಿಕದಿಂದ ಕೊಲೆಸ್ಟಿರಾಲ್ ಉತ್ಪನ್ನವಾಗಿರುತ್ತದೆ. ಇದರ ಪೂರ್ಣ ರಾಸಾಯನಿಕ ವಿನ್ಯಾಸವನ್ನು ಕೆಳಗೆ ತೋರಿಸಿದೆ.

ಚಿತ್ರ-1

ಕೊಲೆಸ್ಟಿರಾಲಿನ ಶರೀರವಿಜ್ಞಾನ ಕಾರ್ಯಶಕ್ತಿಯನ್ನು ಸ್ಪಷ್ಟವಾಗಿ ನಿರ್ಣಯಿಸಲಾಗಿಲ್ಲ. ಆದರೂ ಇದು ಜೀವಚಲನೆಗೆ ಅತ್ಯಾವಶ್ಯಕವಾದ ವಸ್ತುವಾಗಿ ಕಂಡುಬರುತ್ತದೆ. ಶರೀರದಲ್ಲಿ ಅತಿ ಹೆಚ್ಚಾಗಿ ಕೊಲೆಸ್ಟಿರಾಲ್ ಶೇಖರಿಸಿಕೊಂಡರೆ ಕೆಲವು ರೋಗಗಳಿಗೆ ಕಾರಣಕಾರಿಯಾಗುತ್ತದೆ. ಶರೀರದಲ್ಲಿ ಹೆಚ್ಚಿಗೆ ಕೊಲೆಸ್ಟಿರಾಲ್ ಶೇಖರಿಸಿರುವುದಕ್ಕೂ ಅಥಿರೋಸ್ಕ್ಲಿರೋಸಿಸ್ ಎನ್ನುವ ರಕ್ತನಾಳಗಳ ರೋಗಕ್ಕೂ ಸಂಬಂಧವಿರುವಂತೆ ತೋರುತ್ತದೆ. ಇದೇ ಸಂದರ್ಭಗಳಲ್ಲಿ ಪಿತ್ತಾಶ್ಮರಿಗಳೂ(ಗಾನ್ ಸ್ಟೋನ್ಸ್) ಉತ್ಪತ್ತಿಯಾಗುವ ಸೂಚನೆ ಇರುತ್ತದೆ. ಅಥಿರೋಸ್ಕ್ಲಿರೋಸಿಸ್ ಎನ್ನುವ ರೋಗದಲ್ಲಿ ಶುದ್ಧರಕ್ತನಾಳಗಳ ಒಳ ಮೈಮೇಲೆ ಕ್ರಮವಾಗಿ ಕೊಲೆಸ್ಟಿರಾಲ್‍ನಿಂದ ಕೂಡಿದ ಕೊಬ್ಬಿನ ವಸ್ತು ಶೇಖರಿಸಲ್ಪಡುತ್ತದೆ. ಊಟದಲ್ಲಿ ತೆಗೆದುಕೊಳ್ಳುವ ಕೊಲೆಸ್ಟಿರಾಲಿನ ಪರಿಮಾಣಕ್ಕೂ ಅಥಿರೊಸ್ಕ್ಲಿರೋಸಿಸ್ ಬರುವುದಕ್ಕೂ ಸಂಬಂಧವಿರುವುದಿಲ್ಲ. ಊಟದಲ್ಲಿ ತೆಗೆದುಕೊಳ್ಳುವ ಎರಡರಷ್ಟು ಮೊತ್ತದಲ್ಲಿ ಪಿತ್ತಜನಕಾಂಗ ಕೊಲೆಸ್ಟಿರಾಲನ್ನು ಉತ್ಪತ್ತಿಮಾಡುತ್ತದೆ. ಪ್ರಾಣಿಗಳ ಕೊಬ್ಬಿನಲ್ಲಿ ಮಾತ್ರ ಕೊಲೆಸ್ಟಿರಾಲ್ ಇರುತ್ತದೆ. ಸಸ್ಯಾಧಾರದ ಕೊಬ್ಬಿನಲ್ಲಿ ಇದು ಇರುವುದಿಲ್ಲ. ಊಟದಲ್ಲಿ ಹೆಚ್ಚಿಗೆ ತೆಗೆದುಕೊಳ್ಳುವಿಕೆಗೂ ಪಿತ್ತಜನಕಾಂಗದಲ್ಲಿ ಉತ್ಪತ್ತಿಯಾಗುವ ಕೊಲೆಸ್ಟಿರಾಲಿಗೂ ಸರಿದೂಗಿಸುವಂತೆ ಒಂದು ನಿಯಂತ್ರಿಸುವ ಕಟ್ಟುಪಾಡು ಉಂಟು. ಊಟದಲ್ಲಿ ತೆಗೆದುಕೊಳ್ಳುವ ಪರಿಮಾಣ ಕಡಿಮೆಯಾದಾಗ ಪಿತ್ತಜನಕಾಂಗ ಹೆಚ್ಚಿಗೆ ಕೊಲೆಸ್ಟಿರಾಲನ್ನು ಉತ್ಪತ್ತಿಮಾಡುತ್ತದೆ. ಊಟದಲ್ಲಿ ತೆಗದುಕೊಳ್ಳುವ ಪರಿಮಾಣ ಹೆಚ್ಚಿಗೆಯಾದಲ್ಲಿ ಪಿತ್ತಜನಕಾಂಗದಲ್ಲಿ ಕೊಲೆಸ್ಟಿರಾಲಿನ ಉತ್ಪತ್ತಿ ಕಡಿಮೆಯಾಗುತ್ತದೆ.

ಅಥಿರೊಸ್ಕ್ಲಿರೋಸಿಸ್ ಎಂಬ ರೋಗಕ್ಕೆ ಈಡಾಗುವ ಪ್ರಾಣಿ ಮನುಷ್ಯ ಮಾತ್ರ. ರಕ್ತದಲ್ಲಿನ ಕೊಲೆಸ್ಟಿರಾಲಿನ ಮಟ್ಟಕ್ಕೂ ಅಥಿರೊಸ್ಲ್ಕಿರೋಸಿಸ್‍ಗೂ ಸಂಬಂಧ ಉಂಟು ಎನ್ನುವುದಕ್ಕೆ ಸಕಾರಣಗಳಿವೆ. ಮಾನವನ ರಕ್ತದಲ್ಲಿನ ಕೊಲೆಸ್ಟಿರಾಲಿನ ಮಟ್ಟ ಇತರ ಪ್ರಾಣಿಗಳಲ್ಲಿಯ ಮತ್ತು ಪ್ರಯೋಗಶಾಲೆಯಲ್ಲಿಯ ಪ್ರಾಣಿಗಳಲ್ಲಿರುವುದಕ್ಕಿಂತ ಹೆಚ್ಚು. ರಕ್ತದಲ್ಲಿ ಕೆಳಮಟ್ಟದ ಪರಿಮಾಣವಿರತಕ್ಕ ಜನಗಳ ಗುಂಪಿನಲ್ಲಿ ಅಥಿರೊಸ್ಲ್ಕಿರೋಸಿಸ್ ಕೂಡ ಕೆಳಮಟ್ಟದಲ್ಲಿರುವುದು. ಪ್ರಯೋಗಶಾಲೆಯ ಪ್ರಾಣಿಗಳಲ್ಲಿ ರಕ್ತದ ಕೊಲೆಸ್ಟಿರಾಲ್ ಪರಿಮಾಣವನ್ನು ಹೆಚ್ಚಿಸಿ ಅವುಗಳಲ್ಲಿ ಅಥಿರೋಸ್ಲ್ಕಿರೋಸಿಸ್ ಎಂಬ ರೋಗವನ್ನು ಬರುವಂತೆ ಮಾಡಿ ತೋರಿಸಿರುತ್ತಾರೆ. ಇಷ್ಟಾದರೂ ಸಹ ರಕ್ತದಲ್ಲಿನ ಕೊಲೆಸ್ಟಿರಾಲಿನ ಮಟ್ಟದ ಪರಿಮಾಣವೇ ಅಥಿರೊಸ್ಲ್ಕಿರೋಸಿಸ್ ಬರುವುದಕ್ಕೂ ಅಥವಾ ಬರದೆ ಇರುವುದಕ್ಕೂ ಕಾರಣಕಾರಿ ಎನ್ನುವುದನ್ನು ಯಾರೂ ಇಲ್ಲಿಯವರೆಗೂ ನಿರ್ದಿಷ್ಟವಾಗಿ ದೃಢಪಡಿಸಿಲ್ಲ. ಇತರ ಕಾರಕಗಳು ಇದಕ್ಕೆ ಕಾರಣ ಎನ್ನುವ ಭಾವನೆ ಉಂಟು. ಇಂಥ ಕಾರಕಗಳು ಊಟ, ವಯಸ್ಸು, ಲಿಂಗ ಮತ್ತು ಹಲವು ಬಗೆಯ ಹಾರ್ಮೋನುಗಳು ಎಂದು ತಿಳಿದುಬಂದಿದೆ. ಅತಿಕಡಿಮೆ ಕೊಬ್ಬು ಇರುವ ಊಟ ಮತ್ತು ಅತಿಕಡಿಮೆ ಪರಿಮಾಣದಷ್ಟು ಕೆಲೊರಿಗಳಿರುವ ವಸ್ತುಗಳನ್ನು ತಿನ್ನುವುದರಿಂದಲೂ ರಕ್ತದಲ್ಲಿನ ಕೊಲೆಸ್ಟಿರಾಲಿನ ಮಟ್ಟದ ಪರಿಮಾಣ ಕಡಿಮೆ ಮಾಡುವುದರಿಂದಲೂ ಅಥಿರೋಸ್ಲ್ಕಿರೋಸಿಸ್ ಎನ್ನುವ ರೋಗ ಬರುವುದನ್ನು ತಡೆಹಿಡಿಯಬಹುದೆಂದು ಕೆಲವು ವಿಜ್ಞಾನ ಸಂಶೋಧಕರ ಅಭಿಪ್ರಾಯ. ಯಾವ ತರಹ ಕೊಬ್ಬು ಮತ್ತು ಸಾರಜನಕಗಳು ಊಟದಲ್ಲಿ ಎಷ್ಟೆಷ್ಟು ಪರಿಮಾಣದಲ್ಲಿವೆ ಎನ್ನುವುದಕ್ಕೂ ಅಥಿರೋಸ್ಕ್ಲಿರೋಸಿಸ್ ಎನ್ನುವ ರೋಗ ಬರುವುದಕ್ಕೂ ಸಂಬಂಧವುಂಟು. ಈ ವಿಷಯದಲ್ಲಿ ಸಂಶೋಧನೆ ಮುಂದುವರಿದಿದೆ.								(ಡಿ.ಇ. ; ಕೆ.ಟಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ